ಹುಡುಕಿ

ಜೂಲಿಯನ್ ಕ್ಯಾಲೆಂಡರ್ ಈಸ್ಟರ್ ಆಚರಿಸುವವರಿಗೆ ಪಾಸ್ಖ ಶುಭಾಶಯಗಳು ತಿಳಿಸಿದ ಪೋಪ್ ಫ್ರಾನ್ಸಿಸ್

ಪ್ರಭುವಿನ ಪುನರುತ್ಥಾನದ ಹಬ್ಬವನ್ನು ಆಚರಿಸುತ್ತಿರುವ ಈಸ್ಟರ್ನ್-ರೈಟ್ ಕಥೋಲಿಕರು ಹಾಗೂ ಆರ್ಥಡಾಕ್ಸ್ ಸಹೋದರ ಸಹೋದರಿಯರಿಗೆ ವಿಶ್ವಗುರು ಫ್ರಾನ್ಸಿಸ್ ಪಾಸ್ಖ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಉಕ್ರೇನ್, ಪ್ಯಾಲೆಸ್ತೀನ್ ಹಾಗೂ ರಷ್ಯಾ ದೇಶಗಳಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸಿದ್ದಾರೆ.

ವರದಿ: ನೇತನ್ ಮೋರ್ಲೆ, ಕ್ರಿಸ್ಟೋಫರ್ ವೆಲ್ಸ್

"ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಈಸ್ಟರ್ ಹಬ್ಬವನ್ನು ಆಚರಿಸುತ್ತಿರುವ ಈಸ್ಟರ್ನ್-ರೈಟ್ ಕಥೋಲಿಕರು ಹಾಗೂ ಆರ್ಥಡಾಕ್ಸ್ ಸಹೋದರ ಸಹೋದರಿಯರಿಗೆ ನಾನು ಪ್ರಭುವಿನ ಪುನರುತ್ಥಾನದ ಹಬ್ಬದ ಶುಭಾಶಯಗಳು ಕೋರುತ್ತೇನೆ" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.

ವಿಶ್ವದಾದ್ಯಂತ ಇರುವ ಈಸ್ಟರ್ನ್-ರೈಟ್ ಕಥೋಲಿಕರು ಹಾಗೂ ಆರ್ಥಡಾಕ್ಸ್ ಸಹೋದರ ಸಹೋದರಿಯರು ಗ್ರೆಗೋರಿಯನ್ ಕ್ಯಾಲೆಂಡರ್ ಬದಲಿಗೆ ಜೂಲಿಯೆಟ್ ಕ್ಯಾಲೆಂಡರ್ ಅನ್ನು ಉಪಯೋಗಿಸುತ್ತಾರೆ. ಹಾಗಾಗಿ ಈಸ್ಟರ್ ಹಾಗೂ ಇನ್ನಿತರ ಹಬ್ಬದ ಆಚರಣೆಯಲ್ಲಿ ಲ್ಯಾಟಿನ್ ಕಥೋಲಿಕರು ಹಾಗೂ ಇವರ ನಡುವೆ ಭಿನ್ನತೆಯು ಕಂಡುಬರುತ್ತದೆ.

ರಜಿನಾ ಚೇಲಿ ಪ್ರಾರ್ಥನೆಯಲ್ಲಿ ಮಾತನಾಡುತ್ತಾ ವಿಶ್ವಗುರು ಫ್ರಾನ್ಸಿಸ್, ಈಸ್ಟರ್ ಹಬ್ಬದ ಈ ಸುಸಂದರ್ಭದಲ್ಲಿ ಎಲ್ಲೆಡೆಯೂ ಶಾಂತಿ ಹಾಗೂ ಸಮಾಧಾನ ತುಂಬಿ ತುಳುಕಲಿ ಎಂದು ಪ್ರಾರ್ಥಿಸಿದ್ದಾರೆ.

ಮತ್ತೊಮ್ಮೆ ಯುದ್ಧದ ಭೀಕರತೆಯ ಕುರಿತು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್, ಎಲ್ಲದಕ್ಕೂ ಯುದ್ಧವೇ ಪರಿಹಾರವಲ್ಲ. ಯುದ್ಧವು ಎಂದಿಗೂ ಸೋಲನ್ನು ತರುತ್ತದೆ. ಪ್ರಸ್ತುತ ಆಂತರಿಕ ಕಲಹಗಳು ಹಾಗೂ ಯುದ್ಧ ಸನ್ನಿವೇಶದಿಂದ ಭಾದಿತರಾಗಿರುವ ಎಲ್ಲಾ ದೇಶಗಳಲ್ಲಿ ಶಾಂತಿ ಹಾಗೂ ಸಮಾಧಾನ ನೆಲೆಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ ಹಾಗೂ ಈ ಉದ್ದೇಶಕ್ಕಾಗಿ ಪ್ರಾರ್ಥಿಸುವಂತೆ ಎಲ್ಲರಿಗೂ ಕರೆ ನೀಡಿದ್ದಾರೆ.

06 May 2024, 11:08